News

ಗ್ರಾಹಕನ ಖಾತೆಗೆ 30 ದಿನದೊಳಗೆ ಹಣ ಪಾವತಿಸಲು ಬ್ಯಾಂಕ್ ಶಾಖೆಗೆ ಆದೇಶ

 ಸುದ್ದಿದಿನ,ಹಾವೇರಿ
 : ಎ.ಟಿ.ಎಂ.ನಲ್ಲಿ ಹಣ ಡ್ರಾ ಮಾಡಲು ಹೋಗಿ ಹಣ ಬಾರದೆ ಹಣ ಡ್ರಾ ಆಗಿದೆ ಎಂದು ಸಂದೇಶ ಬಂದ ಹಿನ್ನೆಲೆಯಲ್ಲಿ ಗ್ರಾಹಕನ ಹಣವನ್ನು ಡ್ರಾಮಾಡಿದ ಐದು ದಿನಗಳ ಅವಧಿಯೊಳಗೆ ಗ್ರಾಹಕ ಖಾತೆಗೆ ಜಮೆ ಮಾಡದೇ 10 ತಿಂಗಳ ಕಾಲ ವಿಳಂಬಮಾಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ 30 ದಿನದೊಳಗಾಗಿ ರೂ.10ಸಾವಿರ ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗಾಗಿ ಐದು ಸಾವಿರ ರೂ. ಗ್ರಾಹಕನ ಖಾತೆಗೆ ಜಮೆ ಮಾಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗೌರವಾನ್ವಿತ ಅಧ್ಯಕ್ಷರಾದ ಶ್ರೀಮತಿ ಸುನಂದ ಅವರು ತೀರ್ಪು ನೀಡಿದ್ದಾರೆ.

ಬ್ಯಾಡಗಿ ಪಟ್ಟಣದ ಶಿಕ್ಷಕ ಶರೀಫಸಾಬ ರಾಜೇಸಾಬ ಶಿಡೇನೂರ ಅವರು ಬ್ಯಾಡಗಿ ಎಸ್.ಬಿ.ಐ.ಬ್ಯಾಂಕಿನ ಎ.ಟಿ.ಎಂ. ಬಳಸಿ ಬ್ಯಾಡಗಿ ಪಟ್ಟಣದ ಎಕ್ಸಿಸ್ ಬ್ಯಾಂಕಿನ ಎ.ಟಿ.ಎಂ.ನಲ್ಲಿ ದಿನಾಂಕ 02-12-2019 ರಂದು ರೂ.10,000 ಹಣ ಡ್ರಾ ಮಾಡಲು ಹೋದಾಗ ಹಣ ಬಾರದೇ ರೂ.10,000 ಸಾವಿರ ವಿತ್‍ಡ್ರಾ ಆಗಿರುವುದಾಗಿ ಸಂದೇಶ ಬಂದಿದೆ.

ಈ ಕುರಿತು ಶರೀಫಸಾಬ ರಾಜೇಸಾಬ ಶಿಡೇನೂರ ಸಂಬಂಧ ಪಟ್ಟ ಬ್ಯಾಡಗಿ ಎಸ್.ಬಿ.ಐ.

ಹಾಗೂ ಎಕ್ಸಿಸ್ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ತಮಗಾದ ಸಮಸ್ಯೆಯನ್ನು ಹೇಳಿಕೊಂಡಾಗ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳು ಯಾವುದೇ ಕ್ರಮಕೈಗೊಳ್ಳದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ಪ್ರಕರಣದ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಸುನಂದಾ ಹಾಗೂ ಮಹಿಳಾ ಸದಸ್ಯರಾದ ಕುಮಾರಿ ಮಹೇಶ್ವರಿ ಬಿ.ಎಸ್. ಅವರು ಕೂಲಂಕುಷವಾಗಿ ಪರಿಶೀಲಿಸಿ ಮೇಲಿನಂತೆ ದಿನಾಂಕ 24-10-2020 ರಂದು ತೀರ್ಪು ನೀಡಿದ್ದಾರೆ.

ಎಸ್.ಬಿ.ಐ.ಬ್ಯಾಂಕಿನ ಶಾಖೆ ವ್ಯವಸ್ಥಾಪಕರು ಗ್ರಾಹಕನ ಖಾತೆಗೆ ಹಣ ಡ್ರಾ ಮಾಡಿದ ಐದು ದಿನದಿಂದ ಗ್ರಾಹಕ ಖಾತೆಗೆ 10,000 ರೂ. ಹಿಂದಿರುಗಿಸುವವರೆಗೆ ಪ್ರತಿ ದಿನಕ್ಕೆ 100 ರೂ. ದಂಡ ಜಮೆ ಮಾಡಬೇಕು. ಎಕ್ಸಿಸ್ ಬ್ಯಾಂಕ್ ಶಾಖೆ ವ್ಯವಸ್ಥಾಪಕರು ದಾವೆಯ ಖರ್ಚು 2,000 ರೂ. ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗಾಗಿ 3,000 ರೂ. ಗ್ರಾಹಕನ ಖಾತೆಗೆ ಜಮೆ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಸಹಾಯಕ ನೋಂದಣಾಧಿಕಾರಿ ಮತ್ತು ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.