ಬೆಂಗಳೂರು: ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಇತ್ತೀಚೆಗಷ್ಟೇ ಇಲಾಖೆಯು ಶಿಕ್ಷಕರಿಗೆ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಿದೆ. ವೃಂದ -ನೇಮಕಾತಿ ನಿಯಮಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಹೆಚ್ಚು ಖಾಲಿ ಹುದ್ದೆಗಳು ಇದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಿ’ ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.