ಕೇಂದ್ರ ಸರ್ಕಾರದ ಸಮ್ಮತಿ ನಂತರ ಶಾಲೆ ಆರಂಭ : ಸುರೇಶ್ ಕುಮಾರ್

September 05, 2020

 


ಮಾಗಡಿ, ಸೆ.5- ಕೇಂದ್ರ ಸರ್ಕಾರದ ಹಸಿರು ನಿಶಾನೆ ಬಂದ ಕೂಡಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ತಾಲ್ಲೂಕಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ವಿದ್ಯಾಗಮ ತರಗತಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾನಸ ವಿದ್ಯಾನಿಧಿ ಶಾಲೆಯಲ್ಲಿ ಅವರು ಮಾತನಾಡಿದರು.

ನಿರಂತರ ಕಲಿಕೆಯಿಂದ ಮಕ್ಕಳು ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಜಾರಿಗೆ ತರಲಾಗಿದೆ. ಗುಡಿ, ಅರಳಿಕಟ್ಟೆ, ಮರದ ಕೆಳಗೆ ಅಂತರ ಕಾಯ್ದುಕೊಂಡು ಮಕ್ಕಳನ್ನು ಕೂಡಿಸಿ ಶಿಕ್ಷಕರು ಪಾಠ ಪ್ರವಚನ ನೀಡುತ್ತಿದ್ದಾರೆ. ಈ ಮೂಲಕ ವಿದ್ಯಾಗಮ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ನಂಟು ಕೊರೊನಾದಿಂದ ಬೇರ್ಪಟ್ಟರೆ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಅಧಿಕವಾಗಲಿದೆ ಎಂದು ಶಿಕ್ಷಣ ತಜ್ಞ ಶ್ರೀಧರ್ ನೀಡಿದ ವರದಿ ಅನ್ವಯ ಖಾಸಗಿ ಶಾಲೆಗಳಲ್ಲಿ ಆನ್‍ಲೈನ್ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಆನ್‍ಲೈನ್ ಶಿಕ್ಷಣ ಕಷ್ಟ.

ಕೊರೊನಾದಿಂದ ನಿರಂತರವಾಗಿ ಶಾಲೆಗಳನ್ನು ಮುಚ್ಚಿದರೆ ಸರ್ಕಾರಿ ಶಾಲೆಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಕಷ್ಟ. ಇದರಿಂದ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಲಿದೆ. ಬಾಲ್ಯ ವಿವಾಹಗಳು ಅಧಿಕವಾಗಲಿವೆ ಎಂಬುದನ್ನು ಮನಗಂಡು ವಿದ್ಯಾಗಮ ಯೋಜನೆ ಜÁರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೆ.21ರಿಂದ ಶಾಲೆಗಳು ಆರಂಭವಾದರೂ ಸಹಿತ 160 ದಿನಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವುದಾಗಿ ಶಿಕ್ಷಕರು ತಿಳಿಸಿದ್ದಾರೆ. ಶನಿವಾರ ಬ್ಯಾಗ್ ರಹಿತ ಪೂರ್ಣ ತರಗತಿ ದಿನ ನಡೆಸುವ ಉದ್ದೇಶವಿದೆ ಎಂದರು. ಕೊರೊನಾ ಸಂಕಷ್ಟದ ನಡುವೆ ಶಿಕ್ಷಕರ ಸದನಕ್ಕೆ ಅನುದಾನ ನೀಡುವುದು ಕಷ್ಟವಾಗಿತ್ತು. ಶಿಕ್ಷಕರ ಕಲ್ಯಾಣ ನಿಧಿಯಿಂದ ಅನುದಾನ ನೀಡಿದ್ದೇವೆ. ಕಡ್ಡಾಯ ವರ್ಗಾವಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಕೊಲಂಬಸ್ ಮತ್ತು ವಾಸ್ಕೋಡಗಾಮನ ಬದಲು ಸ್ಥಳೀಯ ಜನಪದ ವೀರರನ್ನು ಮಕ್ಕಳಿಗೆ ಪರಿಚಯಿಸಲಾಗುವುದು. ನಗರದ ಮಕ್ಕಳಿಗೆ ಕೃಷಿ ಪಾಠದ ಪರಿಚಯ ಮಾಡಿಸುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಮಕ್ಕಳನ್ನು ಕರೆದೊಯ್ದು, ರಾಗಿ, ಭತ್ತ ಎಲ್ಲಿ, ಹೇಗೆ ಬೆಳೆಯುತ್ತದೆ ಎಂಬುದನ್ನು ಪರಿಚಯ ಮಾಡಿಕೊಡಲಾಗುವುದು ಎಂದರು.

ಭಂಟರಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳನ್ನು ಮಾತನಾಡಿಸಿದರು. ಮುಖ್ಯ ಶಿಕ್ಷಕಿ ಜಿ.ಆರ್.ನಾಗರತ್ನಮ್ಮ, ಶಿಕ್ಷಕರಾದ ಎನ್.ಜಿ.ಶಶಿಧರ್, ಜಿ.ಆನ್.ಆನಂದ್ ಮತ್ತು ಮಾನಸ ವಿದ್ಯಾನಿಧಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಪದ್ಯವನ್ನು ಓದಿಸಿ, ತಪ್ಪನ್ನು ತಿದ್ದಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಇದೇ ವೇಳೆ ಡಿಡಿಪಿಐ ಸೋಮಶೇಖರಯ್ಯ, ಬಿಇಒ, ಎಸ್.ಸಿದ್ದೇಶ್ವರ, ಬಿಆರ್‍ಸಿ ರೂಪಾಕ್ಷ ಅವರೊಂದಿಗೆ ಚರ್ಚಿಸಿದರು. ಕೆಂಪೇಗೌಡ ಪ್ರೌಢ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಚಿವ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಿದರು. ಬಿಜೆಪಿ ಜಿಲ್ಲಾ ಯುವಘಟಕದ ಅಧ್ಯಕ್ಷ ಶಂಕರ್, ಜಿಲ್ಲಾ ಕಾರ್ಯದರ್ಶಿ ರಾಜೇಶ್, ಬಿಜೆಪಿ ಮುಖಂಡರಾದ ಜ್ಯೋತಿನಗರ ಧನಂಜಯ, ಬಾಲಾಜಿ, ಬಿಆರ್‍ಪಿ ಮಂಜಪ್ಪ, ಶಿಕ್ಷಣ ಸಂಯೋಜಕ ಶಿವಲಿಂಗಯ್ಯ ಇದ್ದರು.


Related Articles

Advertisement
Previous
Next Post »