ದುಬೈ : ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಸಿಸಿಐ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ಆಯೋಜನೆ ಮಾಡುತ್ತಿದೆ. ಆದರೆ, ಆಟಗಾರರ ಆರೋಗ್ಯದ ಹಿತದೃಷ್ಟಿಯಿಂದ ಟೂರ್ನಿಯ ವೇಳೆ ಕೋವಿಡ್-19 ಟೆಸ್ಟ್ಗಾಗಿಯೇ ಸುಮಾರು 10 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯ ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ 53 ದಿನಗಳ ಟೂರ್ನಿ ನಡೆಯಲಿದೆ. ಈ ಅವಧಿಯಲ್ಲಿ ಆಟಗಾರರಿಗೆ ಸುಮಾರು 20,000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಬಿಸಿಸಿಐ ಚಿಂತಿಸಿದೆ. ಅದಕ್ಕಾಗಿ 10 ಕೋಟಿ ರೂ. ವ್ಯಯಿಸಲು ಸಿದ್ಧವಾಗಿದೆ.
ಐಪಿಎಲ್‌ನ 8 ಪ್ರಾಂಚೈಸಿಗಳು ಭಾರತದಲ್ಲಿ ನಡೆದ ಪರೀಕ್ಷೆಗಳ ಖರ್ಚನ್ನು ವ್ಯಯಿಸಿದ್ದವು.
"ನಾವು ಯುಎಇ ಮೂಲದ ವಿಪಿಎಸ್ ಹೆಲ್ತ್‌ಕೇರ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಇಷ್ಟೇ ಪ್ರಮಾಣದ ಟೆಸ್ಟ್ಗಳನ್ನು ನಡೆಸಲಿದ್ದೇವೆ ಎಂದು ಹೇಳಲಾಗದು. ಸುಮಾರು 20 ಸಾವಿರಕ್ಕೂ ಹೆಚ್ಚು ಟೆಸ್ಟ್ ನಡೆಸಬಹುದು. ಎಲ್ಲಾ ತೆರಿಗೆಯನ್ನು ಸೇರಿ ಪ್ರತಿ ಟೆಸ್ಟ್ ಗೆ 200 ದಿರ್ಹಾಮ್ ವೆಚ್ಚವನ್ನು ಬಿಸಿಸಿಐ ಖರ್ಚು ಮಾಡುತ್ತಿದೆ" ಎಂದು ಐಪಿಎಲ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಟೂರ್ನಾಮೆಂಟ್ನ ಭಾಗವಾಗಿರುವ ಎಲ್ಲರನ್ನು ಸೇರಿಸಿ ಆಗಸ್ಟ್ 20ರಿಂದ 29ರವರೆಗ 1998 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Comments
Post a Comment