ಕ್ರೀಡೆ

ಐಪಿಎಲ್ 2020: ಕೊನೆಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ತೆರಬೇತಿಗೆ ಸೇರ್ಪಡೆಗೊಂಡ ಸ್ಟಾರ್‌ ವೇಗಿ!

 

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭವಾಗುವ ಒಂದು ತಿಂಗಳಿಗೂ ಮೊದಲೇ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗಿತ್ತು. ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಕೋವಿಡ್‌-19 ಪಾಸಿಟಿವ್ ಬಂದಿತ್ತು. ಇದರ ಬೆನ್ನಲ್ಲೆ ಸುರೇಶ್ ರೈನಾ ಹಾಗೂ ಹರಭಜನ್‌ ಸಿಂಗ್‌ ವೈಯಕ್ತಿಕ ಕಾರಣಗಳಿಂದ ವಿಥ್‌ ಡ್ರಾ ಮಾಡಿಕೊಂಡಿದ್ದರು.

ಮೂರು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ಇದೀಗ ಪರಿಸ್ಥಿತಿ ಸುಧಾರಿಸುತ್ತಿದೆ. ನಂತರ, 13 ಮಂದಿಯ ಕೋವಿಡ್‌-19 ವರದಿ ನೆಗೆಟಿವ್‌ ಬಂದಿತ್ತು. ಅದರಂತೆ ಕಳೆದ ಶುಕ್ರವಾರದಿಂದ ಚೆನ್ನೈ ಫ್ರಾಂಚೈಸಿ ತರಬೇತಿ ನಡೆಸುತ್ತಿದೆ. ಇದೀಗ ಬುಧವಾರ ಚೆನ್ನೈ ಪಾಳಯದಲ್ಲಿ ಮತ್ತೊಂದು ಶುಭ ಸುದ್ದಿ ಹೊರಬಿದ್ದಿದೆ. ಇಷ್ಟು ದಿನಗಳ ಕಾಲ ಐಸೋಲೇಷನ್‌ನಲ್ಲಿದ್ದ ವೇಗಿ ದೀಪಕ್‌ ಚಹರ್‌ ಇದೀಗ ತಂಡ ಕೂಡಿಕೊಂಡಿದ್ದಾರೆ.


ಚೆನ್ನೈ ಸೂಪರ್‌ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಈ ವಿಷಯವನ್ನು ತಿಳಿಸಿದೆ. ಅಂಗಣದಲ್ಲಿ ಅಭ್ಯಾಸ ಮಾಡಿದ ಬಳಿಕ ತನ್ನ ಹೆಬ್ಬೆರಳನ್ನು ಮೇಲಕ್ಕೆ ತೋರಿಸುತ್ತಿರುವ ವೇಗಿಯ ಫೋಟೊವನ್ನು ಸಿಎಸ್‌ಕೆ ತನ್ನ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ. ಈ ಫೋಟೊಗೆ ದೀಪಕ್‌ ಚಹರ್‌ ಎಂಬ ಶೀರ್ಷಿಕೆಯನ್ನು ನೀಡಿದೆ.

ದೀಪಕ್ ಚಹರ್ ಅಭ್ಯಾಸಕ್ಕೆ ಆಗಮಿಸಿರುವುದು ತಂಡಕ್ಕೆ ವರದಾನವಾಗಿದೆ. 2018ರಲ್ಲಿ ತಂಡಕ್ಕೆ ಸೇರ್ಪಡೆಯಾದಾಗಿನಿಂದಲೂ ಚಹರ್‌, ಸಿಎಸ್‌ಕೆ ಬೌಲಿಂಗ್‌ ವಿಭಾಗಕ್ಕೆ ಆಧಾರ ಸ್ಥಂಭವಾಗಿದ್ದಾರೆ. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಅಚ್ಚುಕಟ್ಟಾಗಿ ಬೌಲಿಂಗ್‌ ಮಾಡಿ ಎದುರಾಳಿ ತಂಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿದ್ದಾರೆ.
ಇದೀಗ ಅವರು ಅಭ್ಯಾಸಕ್ಕೆ ಮರಳಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ 2020ರ ಐಪಿಎಲ್‌ ಟೂರ್ನಿಯ ಆರಂಭಿಕ ಪಂದ್ಯವಾಡಲು ಎದುರು ನೋಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್‌ ಹಣಾಹಣಿಯಲ್ಲಿ ಸೋತು ರನ್‌ರ್‌ ಅಪ್‌ಗೆ ತೃಪ್ತಿಪಟ್ಟಿತ್ತು.

ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ದುಬೈನಲ್ಲಿ ಅಭ್ಯಾಸದಲ್ಲಿ ನಿರತವಾಗಿವೆ. ಈ ನಡುವೆ ಕ್ರಿಕೆಟ್‌ ಪಂಡಿತರು ಈ ಬಾರಿ ಐಪಿಎಲ್‌ ಯಾವ ತಂಡ ಗೆಲ್ಲಲಿದೆ, ಯಾರು ಆರೆಂಜ್‌ ಕ್ಯಾಪ್‌ ಪಡೆಯಲಿದ್ದಾರೆ ಹಾಗೂ ಯಾರು ಪರ್ಪಲ್‌ ಕ್ಯಾಪ್‌ ಪಡೆಯಲಿದ್ದಾರೆಂಬಂತೆ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಇದರ ನಡುವೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಕೂಡ ಈ ಬಾರಿ ಐಪಿಎಲ್‌ ಗೆಲ್ಲುವ ತಂಡವನ್ನು ಆರಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್‌ ಟೂರ್ನಿಗಾಗಿ ಆತಿಥೇಯ ಪ್ರಸಾರಕರ ಪರ ಕೆಲಸ ಮಾಡಲು ಬ್ರೆಟ್‌ ಲೀ ಈಗಾಗಲೇ ಮುಂಬೈಗೆ ಬಂದಿಳಿದಿದ್ದು, ಸದ್ಯ ಐಸೋಲೇಷನ್‌ನಲ್ಲಿದ್ದಾರೆ. ಒಂದು ಕಾಲದಲ್ಲಿ ಬ್ರೆಟ್‌ ಲೀ ವಿಶ್ವದ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ ಆಗಿದ್ದರು. ಅವರು ಇದೀಗ ಐಸೋಲೇಷನ್‌ ವೇಳೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗಾಗಿ ಪ್ರಶ್ನೋತ್ತರ ಅವಧಿಯನ್ನು ಏರ್ಪಡಿಸಿದ್ದರು.

Leave a Reply

Your email address will not be published.